‘ಭಾರತ ಎದುರು ಆಡಬೇಕಂದ್ರೆ…?’ ಎಂಬ ಷರತ್ತುಗಳನ್ನು ಮುಂದಿಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸ್ಪಷ್ಟ ಸಂದೇಶ ರವಾನಿಸಿದೆ. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ–ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ವಾರಗಳಿಂದ ಉಂಟಾಗಿದ್ದ ಗೊಂದಲ, ರಾಜಕೀಯ ಒತ್ತಡ ಮತ್ತು ಕ್ರಿಕೆಟ್ ರಾಜತಾಂತ್ರಿಕ ತಂತ್ರಗಳು ಇದೀಗ ಅಂತ್ಯ ಕಂಡಿವೆ. ಪಾಕಿಸ್ತಾನ ಮುಂದಿಟ್ಟಿದ್ದ ಮೂರೂ ಪ್ರಮುಖ ಬೇಡಿಕೆಗಳನ್ನು ಐಸಿಸಿ ಸಂಪೂರ್ಣವಾಗಿ ತಿರಸ್ಕರಿಸಿದ್ದು, ಕೊನೆಗೆ ಪಾಕಿಸ್ತಾನ ಭಾರತ ಎದುರು ಪಂದ್ಯ ಆಡಲು ಒಪ್ಪಿಗೆ ಸೂಚಿಸಿದೆ.
ಭಾರತ–ಪಾಕ್ ಪಂದ್ಯಕ್ಕೆ ಏಕೆ ಇಷ್ಟು ಹೈಪ್?
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಎಂದರೆ ಅದು ಕೇವಲ ಕ್ರೀಡೆ ಮಾತ್ರವಲ್ಲ. ಅದು ರಾಜಕೀಯ, ಆರ್ಥಿಕತೆ, ಅಭಿಮಾನಿಗಳ ಭಾವನೆಗಳು ಮತ್ತು ಜಾಗತಿಕ ಗಮನವನ್ನು ಸೆಳೆಯುವ ದೊಡ್ಡ ಈವೆಂಟ್. ವಿಶ್ವಕಪ್ ವೇದಿಕೆಯಲ್ಲಿ ಭಾರತ–ಪಾಕ್ ಮುಖಾಮುಖಿಯಾಗುವುದರಿಂದ ಐಸಿಸಿಗೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತದೆ. ಅಂದಾಜು ಪ್ರಕಾರ ಒಂದೇ ಒಂದು ಇಂಡೋ–ಪಾಕ್ ಪಂದ್ಯದಿಂದ ₹2200 ಕೋಟಿಗೂ ಅಧಿಕ ಆದಾಯ ಸಿಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಈ ಪಂದ್ಯ ಆಯೋಜನೆ ಬಗ್ಗೆ ಯಾವುದೇ ಗೊಂದಲ ಉಂಟಾದರೂ ಅದು ಜಾಗತಿಕ ಸುದ್ದಿಯಾಗುತ್ತದೆ.
ಬಾಂಗ್ಲಾದೇಶ ಹಿಂಜರಿಕೆ – ಗೊಂದಲದ ಆರಂಭ
ಈ ಗೊಂದಲ ಆರಂಭವಾಗಿದ್ದು ಬಾಂಗ್ಲಾದೇಶದ ನಿರ್ಧಾರದಿಂದ. ಭದ್ರತಾ ಕಾರಣಗಳನ್ನು ಮುಂದಿಟ್ಟು, ಟೂರ್ನಿ ಆರಂಭಕ್ಕೆ ಕೆಲವೇ ದಿನಗಳ ಮೊದಲು ಬಾಂಗ್ಲಾದೇಶ ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಘೋಷಿಸಿತು. ಈ ನಿರ್ಧಾರವು ಐಸಿಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಬಾಂಗ್ಲಾದೇಶದ ಈ ನಿರ್ಧಾರವನ್ನು ಖಂಡಿಸಿ ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಕಠಿಣ ಧೋರಣೆ ತಾಳಿತು.
‘ಭಾರತ ಎದುರು ಮೈದಾನಕ್ಕಿಳಿಯಲ್ಲ’ ಎಂದ ಪಾಕಿಸ್ತಾನ
ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಗಿಟ್ಟಿದ್ದನ್ನು ವಿರೋಧಿಸಿ, ಪಾಕಿಸ್ತಾನ ಫೆಬ್ರವರಿ 15ರಂದು ನಿಗದಿಯಾಗಿದ್ದ ಭಾರತ ಎದುರಿನ ಪಂದ್ಯದಲ್ಲಿ ಆಡದೇ ಇರುವುದಾಗಿ ಘೋಷಿಸಿತು. ಇದು ಐಸಿಸಿಗೆ ನೇರ ಸವಾಲಿನಂತೆ ಕಂಡಿತು. ಈ ಮೂಲಕ ಪಾಕಿಸ್ತಾನ, ಭಾರತ ಎದುರಿನ ಪಂದ್ಯವನ್ನು ರಾಜಕೀಯ ಒತ್ತಡಕ್ಕೆ ಉಪಯೋಗಿಸುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದವು.
ಐಸಿಸಿ ಮುಂದೆ ಮೂರು ಪ್ರಮುಖ ಡಿಮ್ಯಾಂಡ್
ಭಾರತ ಎದುರು ಪಂದ್ಯ ಆಡಬೇಕಾದರೆ ಐಸಿಸಿ ಮೂರು ಷರತ್ತುಗಳನ್ನು ಪೂರೈಸಬೇಕು ಎಂದು ಪಿಸಿಬಿ ಪಟ್ಟು ಹಿಡಿಯಿತು.
ಮೊದಲ ಬೇಡಿಕೆ – ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆ.
2012–13ರಲ್ಲಿ ಕೊನೆಯ ಬಾರಿ ಇಂಡೋ–ಪಾಕ್ ದ್ವಿಪಕ್ಷೀಯ ಸರಣಿ ನಡೆದಿತ್ತು. ಅದಾದ ಬಳಿಕ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಈ ಸರಣಿ ಸ್ಥಗಿತಗೊಂಡಿದೆ. ಆದರೆ ಐಸಿಸಿ, ದ್ವಿಪಕ್ಷೀಯ ಸರಣಿಗಳು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಈ ಬೇಡಿಕೆಯನ್ನು ತಿರಸ್ಕರಿಸಿತು.
ತ್ರಿಕೋನ ಸರಣಿ ಬೇಡಿಕೆ
ಪಾಕಿಸ್ತಾನದ ಎರಡನೇ ಬೇಡಿಕೆ ಭಾರತ–ಪಾಕಿಸ್ತಾನ–ಬಾಂಗ್ಲಾದೇಶ ಒಳಗೊಂಡ ತ್ರಿಕೋನ ಸರಣಿ ಆಯೋಜನೆ. ಇದರಿಂದ ಭಾರೀ ಆದಾಯ ಬರುತ್ತದೆ ಎಂಬ ಲೆಕ್ಕಾಚಾರ ಪಿಸಿಬಿ ಮಾಡಿತ್ತು. ಆದರೆ ಐಸಿಸಿ ಇದು ಕೂಡ ತನ್ನ ಅಧಿಕಾರದ ವ್ಯಾಪ್ತಿಗೆ ಹೊರತಾಗಿರುವುದಾಗಿ ಸ್ಪಷ್ಟಪಡಿಸಿದೆ.
ಭಾರತ ತಂಡದ ಬಾಂಗ್ಲಾ ಪ್ರವಾಸಕ್ಕೂ ‘ನೋ’
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂರನೇ ಬೇಡಿಕೆಯಾಗಿ ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದವು. ಇದಕ್ಕೂ ಐಸಿಸಿ ತಿರಸ್ಕಾರ ನೀಡಿದ್ದು, ರಾಷ್ಟ್ರೀಯ ಕ್ರಿಕೆಟ್ ಮಂಡಳಿಗಳ ನಡುವಿನ ಪ್ರವಾಸಗಳು ಐಸಿಸಿಯ ನಿಯಂತ್ರಣಕ್ಕೆ ಒಳಪಟ್ಟಿಲ್ಲ ಎಂದು ಹೇಳಿದೆ.
ಐಸಿಸಿ ವಾರ್ನಿಂಗ್‌ಗೆ ಕಂಗಾಲಾದ ಪಾಕ್
ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಈ ಧೋರಣೆಯಿಂದ ಬೇಸತ್ತ ಐಸಿಸಿ, ಟೂರ್ನಿಯಿಂದ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿತು. ಇದಾದ ಬಳಿಕ ಪಾಕಿಸ್ತಾನ ಸರ್ಕಾರ ಮತ್ತು ಪಿಸಿಬಿ ತಮ್ಮ ಧೋರಣೆಯನ್ನು ಸಡಿಲಿಸಿತು. ಜಾಗತಿಕ ಕ್ರಿಕೆಟ್ ವೇದಿಕೆಯಲ್ಲಿ ಒಂಟಿಯಾಗುವ ಭೀತಿಯೇ ಪಾಕಿಸ್ತಾನವನ್ನು ಮೆತ್ತಾಗುವಂತೆ ಮಾಡಿತು.
ಕೊನೆಗೂ ಭಾರತ ಎದುರು ಆಡಲು ಒಪ್ಪಿಗೆ
ಎಲ್ಲಾ ಡಿಮ್ಯಾಂಡ್‌ಗಳು ರಿಜೆಕ್ಟ್ ಆದ ನಂತರ ಪಾಕಿಸ್ತಾನ, ಯಾವುದೇ ಷರತ್ತುಗಳಿಲ್ಲದೆ ಭಾರತ ಎದುರು ಪಂದ್ಯ ಆಡಲು ಒಪ್ಪಿಕೊಂಡಿದೆ. ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೈದಾನಕ್ಕಿಳಿಯಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ
ಬಿಸಿಸಿಐ ಮೇಲೆ ಒತ್ತಡ ಹೇರುವ ತಂತ್ರ, ಐಸಿಸಿಯನ್ನು ಮಣಿಸುವ ಪ್ರಯತ್ನ – ಇವೆಲ್ಲವೂ ವಿಫಲವಾಗಿವೆ. ಕ್ರಿಕೆಟ್ ಜಗತ್ತಿನ ಮುಂದೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಭಾರೀ ಮುಖಭಂಗವಾಗಿದೆ. ಇತ್ತ ಐಸಿಸಿ ತನ್ನ ತಟಸ್ಥ ಧೋರಣೆಯನ್ನು ತೋರಿಸಿ, ಕ್ರಿಕೆಟ್ ಆಡಳಿತದಲ್ಲಿ ರಾಜಕೀಯ ಒತ್ತಡಕ್ಕೆ ಜಗ್ಗುವುದಿಲ್ಲ ಎಂಬ ಸಂದೇಶ ರವಾನಿಸಿದೆ.
ಅಭಿಮಾನಿಗಳ ನಿರೀಕ್ಷೆ
ಈ ಎಲ್ಲಾ ವಿವಾದಗಳ ನಡುವೆ ಗೆದ್ದವರು ಕ್ರಿಕೆಟ್ ಅಭಿಮಾನಿಗಳು. ಭಾರತ–ಪಾಕಿಸ್ತಾನ ಪಂದ್ಯ ಖಚಿತವಾಗಿದ್ದು, ವಿಶ್ವದ ಕೋಟ್ಯಂತರ ಅಭಿಮಾನಿಗಳು ಈ ಹೈ-ವೋಲ್ಟೇಜ್ ಮುಖಾಮುಖಿಗಾಗಿ ಕಾದು ನೋಡುತ್ತಿದ್ದಾರೆ. ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯ ಕೇವಲ ರನ್ ಮತ್ತು ವಿಕೆಟ್‌ಗಳಿಗಿಂತ ಹೆಚ್ಚಿನ ಅರ್ಥ ಹೊಂದಿದೆ.
READ MORE